ಅಜಯ್‌ಸಿಂಹಜಿ ದೌಲತ್‌ಸಿನ್ಹಜಿ ಜಡೇಜಾ ಇವರನ್ನು ಅಜಯ್ ಜಡೇಜಾ ಎಂದು ಕರೆಯುತ್ತಾರೆ. ಇವರು ಒಬ್ಬ ಭಾರತೀಯ ಮಾಜಿ ವೃತ್ತಿಪರ ಕ್ರಿಕೆಟ್ ಆಟಗಾರ. ಇವರು ೧೯೯೨ ಮತ್ತು ೨೦೦೦ರ ನಡುವಿನ ಏಕದಿನ ಅಂತಾರಾಷ್ಟ್ರೀಯ ಸ್ವರೂಪದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಿಯಮಿತ ಸದಸ್ಯರಾಗಿದ್ದರು. ಭಾರತಕ್ಕಾಗಿ ಇವರು ೧೫ ಟೆಸ್ಟ್ ಪಂದ್ಯಗಳು ಮತ್ತು ೧೯೬ ಓಡಿಐ ಪಂದ್ಯಗಳನ್ನು ಆಡಿದ್ದಾರೆ. ಅವರು ಸಾಂದರ್ಭಿಕವಾಗಿ ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಜಡೇಜಾ ಅಫ್ಘಾನಿಸ್ತಾನದ ಕ್ರಿಕೆಟ್ ತಂಡದೊಂದಿಗೆ ತಂಡದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕ್ರಿಕೆಟ್ ಆಡುವುದನ್ನು ತೊರೆದ ನಂತರ, ಅವರು ೨೦೧೫ರಲ್ಲಿ ದೆಹಲಿ ಕ್ರಿಕೆಟ್ ತಂಡದ ತರಬೇತುದಾರರಾಗಿ ಕೆಲಸ ಮಾಡಿದರು. ೨೦೦೦ರ ದಶಕದಲ್ಲಿ ಅವರು ಕೆಲವು ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದರು ಮತ್ತು ನೃತ್ಯ ರಿಯಾಲಿಟಿ ಶೋ ಜಲಕ್ ದಿಖ್ಲಾ ಜಾದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. == ವೈಯಕ್ತಿಕ ಜೀವನ == ಜಡೇಜಾ ಅವರು ಹಿಂದಿನ ನವನಗರದ ರಾಜಮನೆತನದಲ್ಲಿ ಜನಿಸಿದರು. ಇವರ ಮನೆತನವು ಕ್ರಿಕೆಟ್ ವಂಶಾವಳಿಯಾಗಿದೆ. ಅವರ ಸಂಬಂಧಿಕರು ಕೆ. ಎಸ್. ರಂಜಿತ್‌ಸಿನ್‌ಜಿ ಅವರ ನಂತರ ಇವರ ಹೆಸರನ್ನು ರಣಜಿ ಟ್ರೋಫಿ ಎಂದು ಹೆಸರಿಸಲಾಗಿದೆ. ಮತ್ತು ಕೆ. ಎಸ್. ದುಲೀಪ್‌ಸಿನ್‌ಜಿ ಇವರ ಹೆಸರನ್ನು ದುಲೀಪ್ ಟ್ರೋಫಿ ಎಂದು ಹೆಸರಿಸಲಾಗಿದೆ. ಜಡೇಜಾ ಅವರ ತಂದೆ ದೌಲತ್‌ಸಿನ್ಹಜಿ ಜಡೇಜಾ ಅವರು ಜಾಮ್‌ನಗರ ಲೋಕಸಭೆಯಿಂದ ೩ ಬಾರಿ ಸಂಸದರಾಗಿದ್ದರು. ಅವರ ತಾಯಿ ಕೇರಳದ ಅಲಪ್ಪುಳದ ಮೂಲದವರು. ಜಡೇಜಾ ಇವರು ಜಯಾ ಜೇಟ್ಲಿ ಅವರ ಪುತ್ರಿ ಅದಿತಿ ಜೇಟ್ಲಿ ಅವರನ್ನು ವಿವಾಹವಾದ್ದರು. ಇವರಿಗೆ ಐಮನ್ ಮತ್ತು ಅಮೀರ ಎಂಬ ಇಬ್ಬರು ಮಕ್ಕಳಿದ್ದಾರೆ. ಅವರು ತಮ್ಮ ಶಾಲಾ ಶಿಕ್ಷಣವನ್ನು ನವದೆಹಲಿಯ ಭಾರತೀಯ ವಿದ್ಯಾ ಭವನದಲ್ಲಿ ಪ್ರಾರಂಭಿಸಿದರು. ನಂತರ ಅವರು ತಮ್ಮ ಕಾಲೇಜ್ ಶಿಕ್ಷಣವನ್ನು ರಾಜ್‌ಕೋಟ್‌ನ ರಾಜ್‌ಕುಮಾರ್ ಕಾಲೇಜಿನಲ್ಲಿ ಪ್ರಾರಂಭಿಸಿದರು. ನಂತರ, ನವದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇವರು ಉನ್ನತ ಶಿಕ್ಷಣವನ್ನು ದೆಹಲಿಯ ಹಿಂದೂ ಕಾಲೇಜಿನಲ್ಲಿ ಪ್ರಾರಂಭಿಸಿದರು. == ಅಂತರರಾಷ್ಟ್ರೀಯ ವೃತ್ತಿಜೀವನ == ಇವರು ಭಾರತ ತಂಡದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. ೧೯೯೬ ರಲ್ಲಿ ಬೆಂಗಳೂರಿನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಕ್ವಾರ್ಟರ್-ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ವಕಾರ್ ಯೂನಿಸ್ ಅವರ ಅಂತಿಮ ಎರಡು ಓವರ್‌ಗಳಲ್ಲಿ ೪೦ ರನ್ ಸೇರಿದಂತೆ ೨೫ ಎಸೆತಗಳಲ್ಲಿ ೪೫ ರನ್‍ಗಳಿಸಿದ್ದರು. ಜಡೇಜಾ, ಮೊಹಮ್ಮದ್ ಅಜರುದ್ದೀನ್ ಅವರೊಂದಿಗೆ ಜಿಂಬಾಬ್ವೆ ಮತ್ತು ಶ್ರೀಲಂಕಾ ವಿರುದ್ಧ ಕ್ರಮವಾಗಿ ೪ ಮತ್ತು ೫ ನೇ ವಿಕೆಟ್‌ಗೆ ಅತಿ ಹೆಚ್ಚು ಏಕದಿನ ಜೊತೆಯಾಟದ ದಾಖಲೆಯನ್ನು ಹೊಂದಿದ್ದಾರೆ. ಜಡೇಜಾ ಅವರು ಫೀಲ್ಡಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಶಾರ್ಜಾದಲ್ಲಿ ಇಂಗ್ಲೆಂಡ್ ವಿರುದ್ಧ ೧ ಓವರ್‌ನಲ್ಲಿ ೩ ರನ್‌ಗಳಿಗೆ ೩ ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಪಂದ್ಯವನ್ನು ಗೆಲ್ಲಿಸಿದ್ದರು. ೩ ಜೂನ್ ೨೦೦೦ರಂದು ಪೆಪ್ಸಿ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಜಡೇಜಾ ಕೊನೆಯ ಬಾರಿಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. == ಚಿತ್ರಕಥೆ == ೨೦೦೩ರ ಖೇಲ್ ಚಿತ್ರದಲ್ಲಿ ಸನ್ನಿ ಡಿಯೋಲ್ ಮತ್ತು ಸುನಿಲ್ ಶೆಟ್ಟಿ ಜೊತೆ ಜಡೇಜಾ ನಟಿಸಿದ್ದಾರೆ. ಅವರು ವಿ.ಕೆ.ಕುಮಾರ್ ನಿರ್ದೇಶನದ ೨೦೦೯ರ ಚಲನಚಿತ್ರ ಪಲ್ ಪಲ್ ದಿಲ್ ಕೆ ಸ್ಸಾತ್ ನಲ್ಲಿ ಸಹ ನಟಿಸಿದ್ದಾರೆ. ಜಡೇಜಾ ಮೊದಲ ಸೀಸನ್‌ನಲ್ಲಿ ಸೆಲೆಬ್ರಿಟಿ ಡ್ಯಾನ್ಸ್ ಶೋ ಜಲಕ್ ದಿಖ್ಲಾ ಜಾದಲ್ಲಿ ಸ್ಪರ್ಧಿಯಾಗಿದ್ದರು. ಅವರು ಟಿವಿ ಶೋ ಕಾಮಿಡಿ ಸರ್ಕಸ್, ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಅಭಿಷೇಕ್ ಕಪೂರ್ ಅವರ ಚಲನಚಿತ್ರ ಕೈ ಪೋ ಚೆಯಲ್ಲಿ ಅತಿಥಿ ಪಾತ್ರವನ್ನು ಮಾಡಿದರು. == ಮ್ಯಾಚ್ ಫಿಕ್ಸಿಂಗ್ ಹಗರಣ == ಇವರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರಲು ಕಾರಣ, ೩ ಜೂನ್ ೨೦೦೦ ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅವರನ್ನು ಕ್ರಿಕೆಟ್‌ನಿಂದ ನಿಷೇಧಿಸಿತು. ನಂತರ, ೨೭ ಜನವರಿ ೨೦೦೩ರಂದು ದೆಹಲಿ ನ್ಯಾಯಾಲಯವು ಅವರ ನಿಷೇಧವನ್ನು ತೆಗೆದುಹಾಕಿತು. ಹೀಗಾಗಿ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೆ ಆಡಲು ಸಾಧ್ಯವಾಗಲಿಲ್ಲ. == ಉಲ್ಲೇಖಗಳು ==